ಯಾನದ ಆರಂಭ
ಬಾಲ್ಯದಲ್ಲಿ ನಡಿಗೆ ಬಂದಾಗ ಆರಂಭವಾದ ಈ ಯಾನ ಅನೇಕ ಮಜಲುಗಳನ್ನು ಕಂಡುಕೊಳ್ಳುತ್ತಾ ಮುಂದಕ್ಕೆ ಸಾಗಿದ ಜೀವನಯಾನ ಈ ಹಂತಕ್ಕೆ ಬಂದುನಿಂತಾಗ ಒಮ್ಮೆ ಹಿಂದಿರುಗಿ ಸಿಂಹಾವಲೋಕನ ಮಾಡಬೇಕೆನಿಸಿತು. ಈ ಹಿನ್ನೋಟದಲ್ಲಿ ತೆರೆದುಕೊಂಡ ನೆನಪುಗಳು ಮತ್ತಷ್ಟು ಹುರುಪು- ಲವಲವಿಕೆಯಿಂದ ಓಡಬೇಕೆನಿಸಿದರೂ ಶರೀರ ನೆನಪಿಸುತ್ತದೆ 'ನಿನಗೀಗ ವಯಸ್ಸಾಗಿದೆ'- ಹೌದೆಂದು (ಬಿಂಕ ಪಕ್ಕಕ್ಕಿಟ್ಟು) ಒಪ್ಪಿಕೊಳ್ಳೋಣ ಎಂದರೂ ಕಾಲನ ಮತ್ತೊಂದು ಎಚ್ಚರಿಕೆಯ ಗಂಟೆ ಕಿವಿಗಬ್ಬರಿಸಿದಂತೆ ಭಾಸವಾಗುತ್ತೆ- ಗಮನಿಸಿ ಕಿವಿಗೊಟ್ಟರೆ ಆ ಗಂಟೆ ಶಬ್ದ ಹೇಳುತ್ತೆ ಈ ನಿನ್ನ ಯಾನ ದ ವೇಗ ತಗ್ಗಿಸು- ಈಗಲೋ ಆಗಲೋ ನಿನ್ನ ಯಾನದ ಅಂತ್ಯ ಬರಲಿದೆಯೆಂದು-ಇರಲಿ ಅದು ಕಾಲನ ನಿಯಮ- ಕಾಲಯಮನ ನಿಯಮ- ಇದು ಬದುಕಿನ ನಿಯಮ-ಈ ನಿಯಮಶಬ್ದದೊಳಗೇ 'ಯಮ' ಅವಿತಿಟ್ಟುಕೊಂಡಿಲ್ಲವೇ? ಅವನನ್ು ಯಾರೂ ಹಿಡಿದಿಡಲಾರರು.ಅವರವರ ಸಮಯಕ್ನನುಗುಣವಾಗಿ ಪಾರುಪತ್ತೆಯವ ಬಂದು ಪರದೆ ಹಿಂದಿಕ್ಕಿ ಯಮನ ಅನಾವರಣಗೊಳಿಸುವರು- ಡೀವೀಜೀ ಯವರ ಕಗ್ಗ ನೆನಪಾಯ್ತು-
"ಯಾತ್ರಿಕರು ನಾವೆಲ್ಲ, ದಿವ್ಯಕ್ಷೇತ್ರವೀ ಲೋಕ, ಸತ್ರದಲಿ ನೇಮದಿಂದಿರಲಿಕ್ಕೆ ಎಡೆಯುಂಟು, ರಾತ್ರಿ ಮೂರಾಯಿತೆನೆ ಹೊರಡಲು ಮೆಚ್ಚುವ ಪಾರುಪತ್ಯದವ- ಮಂಕುತಿಮ್ಮ!"
ಇರಲಿ - ಯಾನ ಶಬ್ದದ ಬೆನ್ನೇರಿ ಹೊರಟ ಈ ಗೀಚಾಟದ ಯಾನ ದಾರಿದಪ್ಪುವ ಮುನ್ನ ಇದರ ಉದ್ದೇಶ ಮರೆಯಬಾರದಲ್ಲವೇ?
ಕೇವಲ ನಡಿಗೆ ಮಾತ್ರ ಲಭ್ಯವಿದ್ದ ಬಾಲ್ಯದ ಆ ದಿನಗಳಲ್ಲಿ ದುಡ್ಡು-ದುಗ್ಗಾಣಿ ಕಾಣದ ದಿನಗಳವು- ಸ್ವಂತದ್ದಿರಲಿ - ಬಾಡಿಗೆಕೊಟ್ಟು ಸೈಕಲ್ ತುಳಿಯುವ ಚಪಲ ಕನಸಿನ ಮಾತಾಗಿತ್ತು. ಆಗಿನ ಕಾಲಕ್ಕೆ ಸೈಕಲ್ ಸವಾರಿಯಲ್ಲಿ ಮನೆಗೆ ಬರುವ ನೆಂಟರೋ-ಇಷ್ಟರೋ ಶ್ರೀಮಂತರೇ ಸೈ. ಅವರನ್ನು ಕಾಡಿ ಬೇಡಿ ಸೈಕಲ್ ತುಳಿಯುವ ಪ್ರಯತ್ನದಲಿ ಸೈಕಲ್ ಸಮೇತ ನಾನೂ ಬಿದ್ದು ಕಾಲಿಗಾದ ಗಾಯದ ಗುರ್ತಿನ ಜೊತೆಗೇ ಮನೆಯವರಿಂದ ಬೈಸಿಕೊಂಡ ನೆನಪೂ ಸಹ ಇಂದಿಗೂ ಮಾಸಿಲ್ಲ.
ಮುಂದೆ ಕಾಲೇಜು ದಿನಗಳಲ್ಲಿ ಹೆಸರಿಗೆ ತಕ್ಕಂತೆ ಅತಿಕಿರಿದಾದ ರಸ್ತೆಯ ತುಮಕೂರಿನ ಚಿಕ್ಕಪೇಟೆಯ ರಸ್ತೆಯಲ್ಲಿ ನರಸಯ್ಯನ ಅಂಗಡಿಯ ಬಾಡಿಗೆ ಸೈಕಲ್ನಲ್ಲಿ ನಾ ಸಾಗುವಾಗ ಎದುರುಗಡೆಯಿಂದ ಬಂದ ( ತನ್ನ ಸೈಕಲಿನ ಎರಡೂ ಹ್ಯಾಂಡಲ್ಗಳಿಗೆ ಪಕ್ವವಾಗಿದ್ದ ಪಚಬಾಳೆಹಣ್ಣಿನ ಗೊನೆಗಳನ್ನು ತಗಲಿಸಿ) ಸವಾರನಿಗೆ ನಾ ತಗಲಿಸಿ ಒಂದೆರಡು ಬಾಳೆಹಣ್ಣುಹಳು ನೆಲಕ್ಕೆ ಬಿದ್ದಾಗ ಆದ ಕಹಿ ನೆನಪೂ ನನ್ನ ಯಾನದುದ್ದಕ್ಕೂ ಎಚ್ಚಿರಿಸುತ್ತಿವೆ. ನಾನು ಬ್ಯಂಕ್ ನೌಕರಿಗೆ ಸೇರುವಮುನ್ನ ದೂರಸಂಪರ್ಕ (ಟೆಲಿಕಾಂ) ಇಲಾಖೆಗೆ ಸೇರಿದಾಗ ಬ್ಯಾಂಕ್ ನಲ್ಲಿ ಸಾಲ ಪಡೆದು ಕೊಂಡ ಹಸಿರುಬಣ್ಣದ BSA ಬೈಸಿಕಲ್ ನನಗೆ ಕೊಟ್ಟ ಖುಷಿ ಪ್ರಾಯಶ: ಕಾರ್ ಖರೀದಿಸಿದಾಗಲೂ ಆಗಿರಲಿಲ್ಲ. ಈಗಿನ ನನ್ನ ಯಾನಕ್ಕೆ ಕಾರು ವೇಗಕೊಟ್ಟಿದೆಯಾದರೂ ನನಗೆ ಅಂದಿನ ಸೈಕಲಿನ ಯಾನವೇ ಇಷ್ಟವಾಗಿ ಮತ್ತೆ ಸೈಕಲಿನಲ್ಲಿ ಯಾನ ಮುಂದುವರೆಸಬೇಕೆಂದು ಬಯಕೆಯಾಗಿ - ಸೈಕಲ್ ಕೊಂಡುಕೊಳ್ಳುವ ಪ್ರಸ್ತಾಪ ಮನೆಯಲ್ಲಿ ( ವಿಶೇಷವಾಗಿ ಮಕ್ಕಳಿಂದ ಅದರಲ್ಲೂ ಮಗಳಿಂದ) ಸಾರಾಸಗಟಾಗಿ "ವೀಟೋ" ಗೊಳ್ಳಲ್ಪಟ್ಟಾಗ ಸ್ವಲ್ಪ ಬೇಸರವೇ ಆಯಿತು. ಗೆಳೆಯ ಗುರುಪ್ರಸಾದ ಮೊನ್ನೆ ಮೊನ್ನೆ ಕೊಂಡ ಹೊಸ ಸೈಕಲಿನಲ್ಲಿ ಅವನು ಕಛೇರಿಗೆ ಬಂದಾಗಲೆಲ್ಲಾ ನನ್ನೊಳಗಿನ ಸೈಕಲ್ ಯಾನದ ಬಯಕೆ ಕಮರದೇ ಚಿಗುರೊಡೆಯುತ್ತಿತ್ತು. ಹೀಗೇ ರಸ್ತೆಯಲ್ಲಿ ಸಾಗುವಾಗಲೆಲ್ಲಾ ಅಲ್ಲಲೆ ಕಂಡ "ಯಾನ" ಫಲಕ - ಅದರ ಬದಿಯಲ್ಲೇ ನಿಲುಗಡೆಗೊಳಿಸಲ್ಪಟ್ಟ ಸೈಕಲ್ಗಳನ್ನು ಕಂಡು ನನ್ನ ಸೈಕಲ್ ಯಾನದ ಬಯಕೆಗೆ ಇಂಬುಸಿಕ್ಕಿದ್ದೇ ತಡ- ಜೇಬಿಂದ ಮೊಬೈಲ್ ಹೊರಗೆಳೆದು "yaana " app download ಮಾಡಿ ಅಲ್ಲಿನ ಸೂಚನೆಗಳಲನ್ನೆಲ್ಲಾ ಪಾಲಿಸಿ - ಹಣ ಮುಂಗಡಿಸಿ- ಒಂದು ಸೈಕಲಿನ ಬೀಗ ಸಡಿಲಿಸಿದಾಗ ನನಗೆ ಪುಷ್ಪಕವಿಮಾನದ ಮಾಲೀಕತ್ವ ಸಿಕ್ಕ ಅನುಭವ.
ಸರಿ ಸೈಕಲ್ ಏರಿದ್ದೇ ಮುಂದುವರಿಯಿತು ನನ್ನ ಯಾನ. ಆರಂಭದಲ್ಲಿ ಸ್ವಲ್ಪ ಆಚೀಚೆ ಆಯತಪ್ಪಿತಾದರೂ ವಿಶ್ವಾಸ -ಛಲ ಎರಡೂ ಮೈಗೂಡಿ ಆಯ ಸರಿಮಾಡಿಕೊಂಡು ಸಾಗಿದ ನನ್ನ ಸೈಕಲ್ ಯಾನ ಯಶಸ್ವಿಯಾಗಿ 8 ಕಿಲೋಮೀಟರ್ ಮುಗಿಸಿ - ಸೈಕಲ್ ನಿಲುಗಡೆಗೆ ಸೇರಿಸಿ ಮನೆಗೆ ಬಂದಾಗ ಎವರೆಸ್ಟ್ ಶಿಖರಾಹೋಣ ಮಾಡಿಬಂದೆನೆಂಬ ಗಳಿಕೆಯ ಭಾವ, ತೃಪ್ತಿ ಬಂದಿದ್ದರೆ ನನ್ನ ಮುಂದಿನ ಯಾನ ಸುಗಮವಾಗಿ ಅಂತಿಮ ದಡ ಸೇರೀತೆಂಬ ವಿಶ್ವಾಸ।
ಇಂದಿಗಿಷ್ಟು ಸಾಕು.
ಯಾನ ಮುಂದುವರೆಯಲಿ- ಕೊನೆಮುಟ್ಟುವವರೆಗೆ.
(ಆಗಸ್ಟ್ ೨೦೨೨ರಲ್ಲಿ ಶ್ರೀ ಎಚ್ ವಿ ಚಂದ್ರಶೇಖರ್ ಬರೆದ ಪತ್ರವಿದು - ಅವರ ಯಾನ ಹೀಗೇ ಮುಂದುವರಿಯಲೆನ್ನುವ ಆಶಯದೊಂದಿಗೆ
)
No comments:
Post a Comment